ನವುರುಕಟ್ಟೆ  - 
ನಗ್ನಬೀಜ ಸಸ್ಯಗಳ (ಜಿಮ್ನೋಸ್ಪರ್ಮ್) ಗುಂಪಿನ ನಿಟೇಲ್ಸ್ ಗಣದ ನೀಟೇಸೀ ಕುಟುಂಬಕ್ಕೆ ಸೇರಿದ ಒಂದು ಬಹುವಾರ್ಷಿಕ ವನಸಸ್ಯ. ನೀಟಮ್ ಸ್ಕ್ಯಾಂಡೆನ್ಸ್ ಇದರ ಶಾಸ್ತ್ರೀಯ ಹೆಸರು. ಸಾಮಾನ್ಯವಾಗಿ 150 ಸೆಂ.ಮೀ.ಗೂ ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ ಇರುವುದು. ಕರ್ನಾಟಕದ ಹಾಸನ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯ ಕಾಡುಗಳಲ್ಲಿ ಹೇರಳವಾಗಿ ಬೆಳೆಯುತ್ತದೆ.

     ಈ ಸಸ್ಯ ಸದಾ ಹಸುರಾಗಿದ್ದು ಸಾಧಾರಣ ಎತ್ತರದ ಮರವಾಗಿಯೂ ಹಬ್ಬುವ ದಪ್ಪಕಾಂಡದ ಬಳ್ಳಿಯಾಗಿಯೂ ಇಲ್ಲವೆ ಪೊದೆಯ ರೂಪದಲ್ಲೋ ಬೆಳೆಯುತ್ತದೆ. ಎಲೆಗಳು ರೆಂಬೆಗಳ ತುದಿಗಳಲ್ಲಿ ಸ್ಥಿತವಾಗಿವೆ. ಕಾಂಡದ ಉಳಿದೆಡೆಗಳಲ್ಲಿ ಬಿದ್ದು ಹೋದ ಎಲೆಗಳ ಗುರುತುಗಳನ್ನು ಕಾಣಬಹುದು. ಎಲೆಗಳು ಅಗಲ, ಒರಟು ಹಾಗೂ ತೆಳು. ಇವು ಅಭಿಮುಖ ಮಾದರಿಯಲ್ಲಿ ಜೋಡಣೆಗೊಂಡಿವೆ. ಕಾಂಡ ಪ್ರತಿ ಗೇಣಿನ ಬಳಿ ಸ್ವಲ್ಪ ದಪ್ಪಗಂಟಿನಂತೆ ಉಬ್ಬಿರುವುದು. ನವುರುಕಟ್ಟೆಗೂ ಆವೃತಬೀಜಸಸ್ಯಗಳ ಗುಂಪಿಗೆ ಸೇರಿದ ಸಸ್ಯಗಳಿಗೂ ತುಂಬ ಹೋಲಿಕೆಯಿದೆ.

    ಹೂಗಳು (ಇವು ನಿಜವಾಗಿ ಶಂಕುಗಳ, ಹೂಬಿಡುವ ಸಸ್ಯಗಳ ಹೂಗಳಿಗಿಂತ ಬಿನ್ನ) ಸ್ಪೈಕ್ ಮಾದರಿಯ ಗೊಂಚಲುಗಳಲ್ಲಿ ಸಮಾವೇಶಗೊಂಡಿದೆ. ಹೂಗಳಲ್ಲಿ ಗಂಡು, ಹೆಣ್ಣು ಎಂದು ಎರಡು ಬಗೆ. ಇವು ಬೇರೆ ಬೇರೆ ಸಸ್ಯಗಳಲ್ಲಿ ಅರಳುವುವು. ಹೂಗೊಂಚಲಿನ ತೊಟ್ಟಿನ ಸುತ್ತ ಬಟ್ಟಲಿನ ಆಕಾರದ ರಚನೆಯಾಗಿ ಒಟ್ಟುಗೂಡಿರುವ ಬ್ರಾಕ್ಟ್‍ಗಳುಂಟು. ಇಂಥ ಬಟ್ಟಲುಗಳು ಒಂದರ ಮೇಲೊಂದು ಜೋಡಿಸಿದಂತಿದ್ದು ಪ್ರತಿಬಟ್ಟಲಿನಲ್ಲೂ ಹೂಗಳಿವೆ. ಹೆಣ್ಣು ಹೂವಿನಲ್ಲಿ ಅಂಡಕ ಮಾತ್ರ ಇದೆ. ಬೇರಾವುದೇ ರಚನೆ ಇಲ್ಲ. ಇದು ನಗ್ನಬೀಜ ಸಸ್ಯಗಳ ಗುಂಪಿನ ಸದಸ್ಯಗಳ ಒಂದು ವಿಶೇಷ ಗುಣವಾಗಿದ್ದು ನವುರುಕಟ್ಟೆಯಲ್ಲೂ ಇದೆ. ಪರಾಗಪ್ರಸಾರ ಹಾಗೂ ನಿಷೇಚನೆಯ ತರುವಾಯ ಗಂಡುಹೂಗಳು ಬಿದ್ದುಹೋಗುವುವು. ಹೆಣ್ಣು ಹೂಗೊಂಚಲಿನ ಬಟ್ಟಲುಗಳ ಅಂಡಕಗಳು ಬೀಜಗಳಾಗಿ ಪರಿವರ್ಧಿಸುವುವು.

    ನವುರುಕಟ್ಟೆಯ ಎಳೆಯ ಎಲೆ ಹಾಗೂ ಹೂಗೊಂಚಲುಗಳನ್ನು ತರಕಾರಿಯಾಗಿ ಬಳಸುವುದಿದೆ. ಬೀಜಗಳನ್ನು ಹುರಿದು ಇಲ್ಲವೆ ಬೇಯಸಿ ತಿನ್ನುವ ಕ್ರಮವೂ ಉಂಟು. ಬೀಜದ ಹೊರಭಾಗವನ್ನು ತೆಗೆದು ಒಣಗಿಸಿ ಎಣ್ಣೆಯಲ್ಲಿ ಬೇಯಿಸಿ ಕೇಕ್ ಮತ್ತು ಬಿಸ್ಕತ್ತುಗಳನ್ನು ಮಾಡುವುದಿದೆ. ಮರದ ತೊಗಟೆಯಿಂದ ಪಡೆಯಲಾಗುವ ನಾರಿನಿಂದ ವಿವಿಧ ರೀತಿಯ ಹಗ್ಗಗಳನ್ನು ತಯಾರು ಮಾಡುವರು. ನಾರು ಬಲು ದೃಢವಾದ್ದೂ ಬಹಳ ಕಾಲ ಬಾಳಿಕೆ ಬರುವಂಥದ್ದೂ ಆಗಿದೆ. ನಾರಿನಿಂದ ಕಾಗದವನ್ನು ಸಹ ತಯಾರಿಸಬಹುದು. ಈ ಸಸ್ಯದಲ್ಲಿ ಆವೃತಬೀಜ ಸಸ್ಯಗಳ ಗುಂಪಿನ ಕೆಲವು ಗುಣಗಳು ಇರುವುದರಿಂದ ಸಸ್ಯಗಳ ವಿಕಾಸವನ್ನು ಕುರಿತು ಹೇಳುವಾಗ, ನಗ್ನಬೀಜಸಸ್ಯಗಳ ಹಾಗೂ ಆವೃತಬೀಜಸಸ್ಯಗಳ ಪರಸ್ಪರ ಸಂಬಂಧವನ್ನು ವಿವರಿಸುವಾಗ ನವುರುಕಟ್ಟೆಯ ಪಾತ್ರ ಹಿರಿದು, ಈ ಎಲ್ಲ ದೃಷ್ಟಿಗಳಿಂದ ಈ ಸಸ್ಯ ತುಂಬ ಅಮೂಲ್ಯವಾದುದು.                                          
            (ಬಿ.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ